Submitted by naipictuasdharwad on Mon, 07/06/2010 - 13:55
Posted in
ಕಿರುಜೇನು / ಕೋಲು ಜೇನು (ಎಪಿಸ್ ಫ್ಲೋರಿಯ) ಮತ್ತು ಅದರ ಗುಣ ಧರ್ಮಗಳು
- ಸ್ಥಳೀಯ ಹೆಸರು:ಕಿರುಜೇನು, ಚಿಟ್ಟಜೇನು, ಕಡ್ಡಿ ಜೇನು.
- ಸಾಮಾನ್ಯವಾಗಿ ಇದು ಪೊದೆಗಳಲ್ಲಿ ಹಾಗೂ ಸಣ್ಣ ಮರಗಳ ಕೊಂಬೆಗಳಲ್ಲಿ ಒಂದೇ ಒಂದು ಎರಿಯನ್ನು ಹೊಂದಿರುವ ಗೂಡನ್ನು ಕಟ್ಟುತ್ತದೆ.
- ಮುಖ್ಯವಾಗಿ ಈ ಪ್ರಭೇದವು ಭಾರತ, ಪಾಕಿಸ್ತಾನ, ಶ್ರೀಲಂಕಾ, ಥಾಯ್ಲ್ಯ್ಲಾಂಡ, ಮಲೇಶಿಯಾ, ಇಂಡೋಚೈನಾ, ಮತ್ತು ಇಂಡೋನೇಶಿಯಾದ ಕೆಲ ಭಾಗಗಳಲ್ಲಿ ಸಮುದ್ರಮಟ್ಟದಿಂದ 500 ಮೀಟರ್ ಎತ್ತರದವರೆಗಿನ ಪ್ರದೇಶಗಳಲ್ಲಿ ಕಂಡುಬರುತ್ತದೆ.
- ಬೇಸಿಗೆ ಕಾಲದಲ್ಲಿ ಇರಾನ್ ದೇಶದ ಕೆಲವೆಡೆ ಸಮುದ್ರಮಟ್ಟ ದಿಂದ 900 ಮೀಟರ್ ಹಾಗೂ ಓಮನ್, ಭಾರತ ಮತ್ತು ಥಾಯ್ಲ್ಯಾಂಡ್ ದೇಶಗಳಲ್ಲಿ 1900 ಮೀಟರ್ ಎತ್ತರದವರೆಗೂ ಈ ಪ್ರಭೇದದ ಜೇನಿನ ಗೂಡುಗಳಿರುವುದು ಕಂಡು ಬಂದಿದೆ.
- ಚಳಿಗಾಲದಲ್ಲಿ ಇವು ತಮ್ಮ ಗೂಡಿನ ಸ್ಥಳವನ್ನು ನೆರಳಿರುವ ಸ್ಥಳದಿಂದ ನೆರಳಿಲ್ಲದ ಅಥವಾ ಪಾಶ್ರ್ವ ನೆರಳಿರುವ ಸ್ಥಳಕ್ಕೆ ಬದಲಾಯಿಸಿಕೊಳ್ಳುತ್ತವೆ.
- ಗಾತ್ರದಲ್ಲಿ ಇವು ತುಡುವೆ ಜೇನಿಗಿಂತ ಚಿಕ್ಕದಾಗಿರುತ್ತವೆ. ಹೆಜ್ಜೇನು, ತುಡುವೆ ಜೇನು ಮತ್ತು ಕಡ್ಡಿ/ಕೋಲು ಜೇನಿನ ಗಾತ್ರದ ಅನುಪಾತ ಕ್ರಮವಾಗಿ 2.39 : 1.33 : 1.00 ರಷ್ಟಿರುತ್ತದೆ.
- ಕೋಲು ಜೇನುಗಳು ಗೂಡು ಕಟ್ಟಲು ಹೆಚ್ಚಾಗಿ, ಪೊದೆಗಳು ಹಾಗೂ ಮರಗಳ ತೆಳುವಾದ ಕೊಂಬೆಗಳನ್ನು ಆರಿಸಿ ಕೊಳ್ಳುತ್ತವೆ ಹಾಗೂ ಆ ಕೊಂಬೆಯನ್ನು ಒಳಗೊಂಡು ಎರಿಯನ್ನು ರಚಿಸುತ್ತವೆ.
- ಕೊಂಬೆಯನ್ನು ಒಳಗೊಂಡ ಎರಿಯ ಮೇಲ್ಬಾಗ ಹೆಚ್ಚು ದಪ್ಪವಾಗಿರುತ್ತದೆ. ಕೆಳಭಾಗಕ್ಕೆ ಬಂದಂತೆಲ್ಲಾ ಎರಿಯು ತೆಳುವಾಗಿರುತ್ತದೆ.
- ಮೇಲ್ಬಾಗದ ಕಣಗಳಲ್ಲಿಯೇ ಜೇನು ತುಪ್ಪದ ಸಂಗ್ರಹಣೆ ಮಾಡುತ್ತವೆ ಅಲ್ಲದೇ ಅಗಲವಾದ ಈ ಭಾಗವು ಹೊರಗಿನಿಂದ ಮಧು ಮತ್ತು ಪರಾಗವನ್ನು ಹೊತ್ತು ತಂದ ಕೆಲಸಗಾರ ನೊಣಗಳು ಇಳಿಯುವುದಕ್ಕೆ ಹಾಗೂ ಸಂವಹನ ನೃತ್ಯ ಮಾಡುವುದಕ್ಕೆ ಸಹಕಾರಿಯಾಗಿರುತ್ತದೆ.
- ಹೆಚ್ಚು ಗಿಡಮರಗಳಿಲ್ಲದ ಪ್ರದೇಶಗಳಲ್ಲಿ ಕೋಲು ಜೇನುಗಳೂ ಸಹ ಗೋಡೆಗಳು ಸಂಧಿಸುವಲ್ಲಿ ಮತ್ತು ಕಟ್ಟಡಗಳ ಹೊರಚಾಚಿದ ಕಲ್ಲಿನ ಭಾಗಗಳಲ್ಲಿ ಊಳಿದ ಜೇನುಗಳಂತೆಯೇ ಎರಿಗಳನ್ನು ರಚಿಸುತ್ತವೆ.
- ಈ ಜೇನುನೊಣಗಳು ಒಂದೇ ಸ್ಥಳದಲ್ಲಿ ಹೆಚ್ಚು ಸಮಯದವರೆಗೆ ನೆಲೆಸುವುದು ತಂಬಾ ವಿರಳ. ಒಂದು ಸ್ಥಳದಲ್ಲಿನ ಗೂಡನ್ನು ಬಿಟ್ಟು ಬೇರೆಡೆಗೆ ಹೋಗಿ ನೆಲೆಸಿದಾಗ ಬಿಟ್ಟು ಹೋಗಿರುವ ಗೂಡಿನಲ್ಲಿನ ಮಕರಂದ, ಪರಾಗ ಹಾಗೂ ಮೇಣವನ್ನು ಸಂಗ್ರಹಿಸಿಕೊಂಡುಬರುವ ವಿಶಿಷ್ಟ ಗುಣವನ್ನು ಇವು ಹೊಂದಿರುತ್ತವೆ.
- ಒಂದೇ ಎರಿಯನ್ನು ಕಟ್ಟಿ ತುಂಬಾ ಕಡಿಮೆ ಪ್ರಮಾಣದಲ್ಲಿ ಜೇನು ತುಪ್ಪದ ಸಂಗ್ರಹಣೆ ಮಾಡುವುದರಿಂದ ಹಾಗೂ ಒಂದು ಸ್ಥಳದಲ್ಲಿ ಹೆಚ್ಚು ಕಾಲ ಸ್ಥಿರವಾಗಿ ನೆಲಸದೇ ಇರುವುದರಿಂದ ಇದರ ಸಾಕಾಣಿಕೆಯ ಬಗ್ಗೆ ಹೆಚ್ಚು ಪ್ರಯತ್ನಗಳು ನಡೆದಿಲ್ಲ.
- ಈ ಪ್ರಭೇದದ ಜೇನುತುಪ್ಪಕ್ಕೆ ಅರಬ್ ರಾಷ್ಟ್ರಗಳಲ್ಲಿ ಹೆಚ್ಚು ಬೇಡಿಕೆಯಿದ್ದು, ಉತ್ತರ ಓಮೆನ್ ದೇಶದ ಕೆಲವು ಪ್ರದೇಶಗಳಲ್ಲಿ ಇವುಗಳನ್ನು ಸಾಕಾಣಿಕೆ ಮಾಡಲಾಗುತ್ತಿದೆ.
- ಎರಿಯಲ್ಲಿ ಜೇನಿನ ಭಾಗವನ್ನು ಮಾತ್ರ ಕತ್ತರಿಸಿ ತೆಗೆದು ಮೊಟ್ಟೆ ಮರಿಗಳಿರುವ ಭಾಗವನ್ನು ಖಜರ್ೂರದ ಎಲೆಯ ದಂಟಿನಿಂದ ಕಟ್ಟಿ ಅವುಗಳ ಸಹಜ ವಾಸಸ್ಥಾನಗಳಲ್ಲಿ ಇರಿಸುವ ವಿದಾನವನ್ನು ಅಲ್ಲಿ ಅನುಸರಿಸಲಾಗುತ್ತಿದೆ.
- ಪ್ರತೀ ಕುಟುಂಬದಿಂದ ಒಂದು ಕಿಲೋಗ್ರಾಂಗಳಷ್ಟು ಮಾತ್ರ ಜೇನು ತುಪ್ಪವನ್ನು ಕೊಡಬಲ್ಲ ಈ ಜೇನುನೊಣಗಳು ಮುಖ್ಯವಾಗಿ ನಮ್ಮ ಬೆಳೆಗಳ ಪರಾಗಸ್ಪರ್ಶ ಕ್ರಿಯೆಯಲ್ಲಿ ಸಹಕಾರಿಯಾಗುತ್ತವೆ.
- ತಮ್ಮ ಗೂಡಿನಿಂದ 0.5 ಕಿ.ಮೀ ದೂರದವರೆಗಿನ ಪ್ರದೇಶದಲ್ಲಿ ಆಹಾರ ಸಂಗ್ರಹಿಸುವ ಇವು ಉಷ್ಣವಲಯ ಮತ್ತು ಒಣ ತಗ್ಗುಪ್ರದೇಶ ಇತ್ಯಾದಿ ಹವಾಮಾನಗಳಲ್ಲಿ ಒಗ್ಗಿ ಕೊಳ್ಳುವುದರಿಂದ ಹಾಗೂ ವಲಸೆ ಹೋದರೂ ಅತೀ ಸಮೀಪದ ಸ್ಥಳದಲ್ಲಿಯೇ ನೆಲೆಸುವುದರಿಂದ ಆಯಾ ಪ್ರದೇಶದ ಬೆಳೆಗಳ ಪರಾಗಸ್ಪರ್ಶವನ್ನು ಅತ್ಯಂತ ಯಶಸ್ವಿಯಾಗಿ ಇವು ನಿರ್ವಹಿಸುತ್ತವೆ.
Source: Dr. Gaveegowda
Prof. & Head
Department of Apiculture
UAS,GKVK,Bangalore-65
- Login to post comments
- 2287 reads
