ರಾಣಿ ಜೇನು ನೊಣ
ಜೇನು ಕುಟುಂಬದಲ್ಲಿ ಒಂದೇ ರಾಣಿ ನೊಣ ಇರುತ್ತದೆ.
ರಾಣಿ ಗುರುತಿಸುವಿಕೆ :
ಪರಿಪೂರ್ಣವಾಗಿ ಬೆಳೆದಂತಹ ಹೆಣ್ಣು ನೊಣ ಕಪ್ಪಾಗಿ ಇತರೇ ನೊಣಗಳಿಗಿಂತ ದಪ್ಪವಾಗಿರುತ್ತೆ
ಹೊಟ್ಟೆಯ ತುದಿ ಭಾಗ ಚೂಪಾಗಿರುತ್ತದೆ
ರೆಕ್ಕೆಗಳು ಹೊಟ್ಟೆಯನ್ನು ಪೂರ್ತಿಯಾಗಿ ಮುಚ್ಚಿಕೊಂಡಿರುವುದಿಲ್ಲವಾದ್ದರಿಂದ ಇದನ್ನು ಸುಲಭವಾಗಿ ಗುರುತಿಸಬಹುದು.
ಇತರೆ ಮಾಹಿತಿ :
ಇದು ಕೆಲವು ಬಾರಿ ಮಾತ್ರ ಕುಟುಂಬವನ್ನು ಬಿಟ್ಟು ಹೊರಗೆ ಹಾರಾಡಿ ಗೂಡಿಗೆ ಹಿಂತಿರುಗುತ್ತದೆ.
ಇವು ಲೈಂಗಿಕ ಸಂಪರ್ಕಕ್ಕೋಸ್ಕರ ಗೂಡಿನಿಂದ ಹೊರಗೆ ಹಾರಿ ಹೋಗುತ್ತದೆ. ಇದನ್ನು "ಕೂಡುವಿಕೆಯ ಹಾರಾಟ ಅಥವಾ ವಿವಾಹದ/ಲೈಂಗಿಕ ಹಾರಾಟ" ಎನ್ನುತ್ತಾರೆ.
ಕೊನೆಯದಾಗಿ ಕುಟುಂಬವು ಪಾಲಾಗುವ ಸಮಯದಲ್ಲಿ ರಾಣಿ ನೊಣವು ಗೂಡನ್ನು ಬಿಟ್ಟು ಸುಮಾರು ಅರ್ಧದಷ್ಟು ಕೆಲಸಗಾರ ನೊಣಗಳನ್ನು ಕರೆದುಕೊಂಡು ಹಾರಿಹೋಗುತ್ತದೆ.
ರಾಣಿ ನೊಣದ ಮುಖ್ಯ ಕೆಲಸಗಳು :
ಮೊಟ್ಟೆ ಇಡುವುದು (ಕುಟುಂಬದಲ್ಲಿ ಎಷ್ಟು ಮರಿ ಹುಳುಗಳನ್ನು ಸಾಕಲು ಸಾಧ್ಯವಿರುತ್ತದೆಯೋ ಅಷ್ಟು ಮೊಟ್ಟೆಗಳನ್ನು ಇಡುತ್ತದೆ).
ತುಡುವೆ ಜೇನಿನಲ್ಲಿ ಮತ್ತು ಕಡ್ಡಿ/ಕೋಲು ಜೇನಿನಲ್ಲಿ ದಿನವೊಂದಕ್ಕೆ ಇಡುವ ಮೊಟ್ಟೆಗಳ ಸಂಖ್ಯೆಯು ಕ್ರಮವಾಗಿ 550 ರಿಂದ 1000 ಹಾಗೂ 325 ರಿಂದ 365 ರಷ್ಟು ಇರುತ್ತದೆ.
ರಾಣಿಯ ಆಹಾರ
ಕೆಲಸಗಾರ ನೊಣಗಳ ಶರೀರದ ಗ್ರಂಥಿಗಳಿಂದ ಸ್ರವಿಸಲ್ಪಟ್ಟ "ರಾಜಶಾಹಿರಸ"
ರಾಣಿ ಮೊಟ್ಟೆ ಇಡುವ ಸಂಖ್ಯೆಯು ಈ ಆಹಾರದ ಗುಣಮಟ್ಟ ಹಾಗೂ ಪ್ರಮಾಣವನ್ನು ಅವಲಂಬಿಸಿರುತ್ತದೆ. ಬೆಟ್ಟ ಗುಡ್ಡ ಪ್ರದೇಶಗಳಲ್ಲಿರುವ ಜೇನು ಕುಟುಂಬಗಳಲ್ಲಿ ಚಳಿಗಾಲದಲ್ಲಿ ಮೊಟ್ಟೆಯನ್ನು ಇಡದೇ ಉಳಿಯುವ ಸಾಧ್ಯತೆ ಇರುತ್ತದೆ.
ಆದರೆ ಮೈದಾನ ಪ್ರದೇಶಗಳಲ್ಲಿ ಬೇಸಿಗೆ ಕಾಲದಲ್ಲಿ ಅತೀ ಕಡಿಮೆ ಮೊಟ್ಟೆಗಳನ್ನು ಇಡುತ್ತವೆ.
ಗರ್ಭವತ್ತಾದ/ಫಲೋತ್ಪಾದಕ ಮೊಟ್ಟೆಗಳಿಂದ ರಾಣಿ ನೊಣ ಅಥವಾ ಕೆಲಸಗಾರ ನೊಣಗಳು ಉತ್ಪತ್ತಿಯಾಗುತ್ತವೆ. ಗರ್ಭವತ್ತಾಗಿರದ/ಫಲವತ್ತಲ್ಲದ ಮೊಟ್ಟೆಗಳಿಂದ ಗಂಡು ನೊಣಗಳು ಉತ್ಪತ್ತಿಯಾಗುತ್ತವೆ.
ಕುಟುಂಬಕ್ಕೆ ಅನುಗುಣವಾಗಿ ರಾಣಿ ನೊಣವು ಎರಡು ರೀತಿಯ ಮೊಟ್ಟೆಗಳನ್ನು ಇಡುತ್ತದೆ. ನಿತ್ಯ ಇಡುವ ಮೊಟ್ಟೆಗಳ ಸಂಖ್ಯೆಯು ಗೂಡಿನ ಸುತ್ತಮುತ್ತಲಿನಲ್ಲಿ ದೊರಕುವ ಜೇನುನೊಣಗಳ ಆಹಾರವನ್ನು ಅವಲಂಬಿಸಿರುತ್ತದೆ.
ಮಕರಂದ ಮತ್ತು ಪರಾಗ ಹೆಚ್ಚಿನ ಪ್ರಮಾಣದಲ್ಲಿ ದೊರಕುತ್ತಿದ್ದರೆ ರಾಣಿ ನೊಣವು ಹೆಚ್ಚಿನ ಸಂಖ್ಯೆಯಲ್ಲಿ ಮೊಟ್ಟೆಯನ್ನು ಇಡುವುದರಿಂದ ಮರಿ ಹುಳುಗಳ ಸಂಖ್ಯೆಯೂ ಹೆಚ್ಚಾಗಿರುತ್ತದೆ.
ಆಹಾರದ ಕೊರತೆ ಇರುವಂತ ಕಾಲದಲ್ಲಿ ಅತೀ ಕಡಿಮೆ ಮರಿಹುಳುಗಳನ್ನು ಸಾಕುತ್ತವೆ ಅಥವಾ ಮರಿ ಬೆಳೆಸುವ ಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತವೆ.
ರಾಣಿಗೆ ವಯಸ್ಸಾದಂತೆಲ್ಲಾ ಅದರ ಮೊಟ್ಟೆ ಇಡುವ ಶಕ್ತಿಯೂ ಕಡಿಮೆಯಾಗುತ್ತದೆ.
ಆದ್ದರಿಂದ ಲಾಭದಾಯಕ ಜೇನು ಸಾಕಾಣಿಕೆಗೆ ಪ್ರತಿ ವರ್ಷ ಹಳೆಯ ರಾಣಿಯನ್ನು ತೆಗೆದು ಹೊಸ ರಾಣಿ ನೊಣವನ್ನು ಒದಗಿಸುತ್ತಿರಬೇಕು
Source: Dr. Gaveegowda
Prof. & Head
Department of Apiculture
UAS,GKVK,Bangalore-65
- Login to post comments
- 2718 reads
